ಬ್ಯಾಸಿಟ್ರೇಸಿನ್ 
	ಬ್ಯಾಸಿಲ್ಲಸ್ ಸಬ್‍ಟೆಲಿಸ್ ಎಂಬ ಏಕಾಣುಜೀವಿಯಿಂದ (ಟ್ರೇಸಿ ಪ್ರಭೇದ) ತಯಾರಾಗುವ ಪ್ರತಿಜೈವಿಕ ವಸ್ತು (ಆಂಟಿಬಯೊಟಿಕ್). ಈ ಏಕಾಣುಜೀವಿಯನ್ನು ಬ್ಯಾಸಿಲ್ಲಸ್ ಲೈಕೆನಿಫಾರ್ಮಿಸ್ ಎಂದೂ ವ್ಯವಹರಿಸುವುದಿದೆ. ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸಿನ ಶಸ್ತ್ರಚಿಕಿತ್ಸಾ ವಿಭಾಗದ ಏಕಾಣುಜೀವಿ ಸಂಶೋಧನ ಪ್ರಯೋಗಾಲಯದಲ್ಲಿ ಬ್ಯಾಬಿನಾ ಜಾನ್ಸನ್ ಮತ್ತು ಫ್ರಾಂಕ್ ಎಲ್ ಮೆಲನಿ ಎಂಬವರಿಂದ ಬ್ಯಾಸಿಟ್ರೇಸಿನ್ 1943 ಮೇ ತಿಂಗಳಲ್ಲಿ ಆವಿಷ್ಕರಿಸಲ್ಪಟ್ಟಿತು.

	ಮಾರ್ಗರೆಟ್ ಟ್ರೇಸಿ ಎಂಬ 7 ವರ್ಷದ ಬಾಲಿಕೆ 1943ರಲ್ಲಿ ನ್ಯೂಯಾರ್ಕಿನ ರಸ್ತೆಯೊಂದರಲ್ಲಿ ಕಾರು ಅಪಘಾತಕ್ಕೊಳಗಾಗಿ ಅಲ್ಲಿಯ ಪ್ರೆಸ್ಬಿಟೇರಿಯನ್ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಳು. ಟ್ರೀಸಿಯ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡುವಾಗ ಅದರ ಕೀತ ತುಣುಕೊಂದನ್ನು (ಇನ್‍ಫೆಕ್ಟೆಡ್‍ಪೀಸ್) ತೆಗೆದುಕೊಂಡು ಅದರಲ್ಲಿದ್ದ ಮತ್ತು ಸೋಂಕು ಉಂಟುಮಾಡಿರಬಹುದಾಗಿದ್ದ ಏಕಾಣುಜೀವಿಯನ್ನು ಕೃಷಿ ಮಾಡಲು ಪ್ರಯತ್ನಿಸಿದರು. ಅಲ್ಲಿ ಆಗ ರೂಢಿಯಲ್ಲಿದ್ದ ಕ್ರಮವಿದು. ಕೃಷಿಯಲ್ಲಿ ಕಂಡುಬಂದ ಅನೇಕ ಬಗೆ ಏಕಾಣುಜೀವಿಗಳ ಪೈಕಿ ಒಂದು, ಮಿಕ್ಕ ಹಲವು ಬಗೆ ಏಕಾಣುಜೀವಿಗಳ ಬೆಳೆವಣಿಗೆಗೆ ಪ್ರತಿರೋಧಕವಾಗಿರುವುದು ಗೊತ್ತಾಯಿತು. ಈ ಏಕಾಣುಜೀವಿಯನ್ನು ಪ್ರತ್ಯೇಕಿಸಿ ಬೇರೆಯೇ ಕೃಷಿ ಮಾಡಿದಾಗ ಕೃಷಿ ಮಾಧ್ಯಮದಲ್ಲಿ ಪ್ರತಿರೋಧಕ ವಸ್ತು ದೊರೆಯಿತು. ಟ್ರೇಸಿಯ ಗಾಯದಲ್ಲಿದ್ದಂಥ ಏಕಾಣುಜೀವಿಯಿಂದ (ಬ್ಯಾಸಿಲ್ಲಸ್) ಉದ್ಭವಿಸುವ ಈ ಪ್ರತಿಜೈವಿಕಕ್ಕೆ ಬ್ಯಾಸಿಟ್ರೇಸಿನ್ ಎಂದು ಹೆಸರಿಸಲಾಯಿತು. ಪ್ರಾಣಿಗಳ ಮೇಲೆ ಪ್ರಯೋಗಿಸಿದಾಗ ಇದು ಹಾನಿಕರ ವಸ್ತು ಅಲ್ಲವೆಂದೂ ಬಿಳಿ ಇಲಿಗಳಿಗೆ ಚರ್ಮದ ಅಡಿ ಚುಚ್ಚುಮದ್ದಾಗಿ ಕೊಟ್ಟಾಗ ಪ್ರಬಲ ವಿಷಾಣುವಾದ ಸ್ಟ್ರೆಪ್ಟೊಕಾಕಸ್ ಹಿಮೊಲಿಟೆಕಸ್ ವಿರುದ್ಧ ಉತ್ತಮ ರಕ್ಷಣೆ ಒದಗಿಸುವುದೆಂದೂ ವ್ಯಕ್ತಿಗಳಲ್ಲಿ ತೀವ್ರ ವ್ರಣಗಳ ನೆರೆಯಲ್ಲಿ ಸ್ಥಳೀಯ ಚುಚ್ಚು ಮದ್ದಾಗಿ ಕೊಟ್ಟಾಗ ವ್ರಣ ಹರಡುವುದು ತಪ್ಪುತ್ತಿತ್ತೆಂದೂ ತಿಳಿಯಿತು.

	ಇದೇ ವೇಳೆ ಅದೇ ಕೊಲಂಬಿಯ ವಿಶ್ವವಿದ್ಯಾಲಯದ ವೈದ್ಯರು ರಸ್ತೆಯ ಅಪಘಾತದಲ್ಲಿ ಉಂಟಾದ ಸೋಂಕು ವ್ರಣಗಳಿಗೆ ಶ್ರೇಷ್ಠ ಚಿಕಿತ್ಸಕಗಳು ಸಲ್ಫೋನೆ ಮೈಡುಗಳೇ ಅಥವಾ ಆ ತರುಣದಲ್ಲಿ ಸಾರ್ವಜನಿಕವಾಗಿ ಪ್ರಯೋಗಕ್ಕೆ ಬಂದಿದ್ದ ಪೆನಿಸಿಲಿನ್ನೇ ಎಂದು ನಿರ್ಧರಿಸುವ ವ್ಯಾಸಂಗದಲ್ಲಿ ನಿರತರಾಗಿದ್ದರು. ಇವರು ಬ್ಯಾಸಿಟ್ರೇಸಿನ್ನಿನ ಮುಂದಿನ ಸಂಶೋಧನೆ ಕೈಗೊಂಡು ಅದನ್ನು ಪರಿಷ್ಕರಿಸಿ ನೂರುಪಟ್ಟು ಸಾಂದ್ರೀಕರಿಸಿದಾಗ ಬಿಳಿ ಇಲ್ಲವೆ ಸ್ವಲ್ಪ ಮಾತ್ರ ಕಂದು ಬಣ್ಣದ ಲೀನಕಾರಿ (ಸಾಲ್ಯುಬಲ್) ಪುಡಿ ದೊರೆಯಿತು. ಇದರ ಅಣುತೂಕ ಸುಮಾರು 1500 ಇದ್ದು ಇದು ನಾಲ್ಕೈದು ಬಗೆ ಪಾಲಿಪೆಪ್ಟೈಡುಗಳ ಮಿಶ್ರಣವಾಗಿತ್ತೆಂದು ತಿಳಿದುಬಂತು. ಬ್ಯಾಸಿಟ್ರೇಸಿನ್ನನ್ನು ಚುಚ್ಚುಮದ್ದಾಗಿ ಕೊಟ್ಟಾಗ ಅದು ವ್ಯಕ್ತಿಗಳಲ್ಲಿ ಸುರಕ್ಷಿತವೆನ್ನುವುದು ಖಾತರಿಯಲ್ಲದಿರುವುದೂ ಗೊತ್ತಾಯಿತು. ಅದು ಮಾನವನ ಮೂತ್ರಜನಕಾಂಗ ಕ್ರಿಯೆಗೆ ಧಕ್ಕೆ ಮಾಡುವ ಪ್ರಮೇಯವಿತ್ತು. ಆದರೆ ಇದನ್ನು ಸೇವಿಸಿದಾಗ ಜೀರ್ಣನಾಳದಲ್ಲಿ ಜೀರ್ಣವಾಗಿ ಹೋಗದೆ ಅಲ್ಲಿ ಹೀರಲ್ಪಟ್ಟು ರಕ್ತಗತ ಆಗುವುದಿಲ್ಲವೆಂದೂ ಆದ್ದರಿಂದ ಇದನ್ನು ಸೇವಿಸಿದಾಗ ಮೂತ್ರಜನಕಾಂಗದ ಕ್ರಿಯೆಗೆ ಧಕ್ಕೆಯಾಗುವ ಸಂಭವವಿಲ್ಲವೆಂದೂ ತಿಳಿಯಿತು. ವಿಷಯ ಹೀಗಿದ್ದುದರಿಂದ ಬ್ಯಾಸಿಟ್ರೇಸಿನ್ನನ್ನು ಕರುಳಿನ ಒಳಗೆ ಸ್ಥಳೀಯವಾಗಿ ವರ್ತಿಸುವ ಸುರಕ್ಷಿತ ಪ್ರತಿಜೈವಿಕವಾಗಿ ಬಳಸಬಹುದೆಂಬುದು ವಿಶದವಾಯಿತು. ಅಮೀಬಕೃತ ಆಮಶಂಕೆ ಮುಂತಾದ ಕರುಳುರೋಗಗಳಲ್ಲಿ ಬ್ಯಾಸಿಟ್ರೇಸಿನ್ನಿನ ಸೇವನೆ ಚಿಕಿತ್ಸಕ ಕ್ರಮವಾಗಿ ರೂಢಿಗೆ ಬಂತು. ಹಾಗೆಯೇ ಸ್ಥಳೀಯವಾಗಿ ಕಣ್ಣುಕಿವಿ ಮೂಗಿನಲ್ಲಿ ಬಳಸಬಹುದಾದ ದ್ರಾವಣ, ಮುಲಾಮುಗಳಲ್ಲೂ ಬ್ಯಾಸಿಟ್ರೇಸಿನ್ನನ್ನು ಸೇರಿಸುವುದು ಪ್ರಾರಂಭವಾಯಿತು. ವ್ರಣಗಳು, ಕೀತಗಾಯಗಳು, ಬೆನ್ನುಫಣಿ (ಕಾರ್ಬಂಕಲ್), ಕಜ್ಜಿ ಮುಂತಾದ ಸ್ಥಿತಿಗಳಲ್ಲಿ ಬ್ಯಾಸಿಟ್ರೇಸಿನ್ ಉತ್ತಮ ಸ್ಥಳೀಯ ಮದ್ದಾಗಿ ಉಪಯೋಗಕ್ಕೆ ಬರುತ್ತದೆ.

	ದೇಹದಲ್ಲಿ ಬ್ಯಾಸಿಟ್ರೇಸಿನ್ನಿಗೆ ಪ್ರತಿರೋಧಕತೆ (ರೆಸಿಸ್ಟೆನ್ಸ್) ಸಾಮಾನ್ಯವಾಗಿ ಉದ್ಭವಿಸುವುದಿಲ್ಲ. ಪೆನ್ನಿಸಿಲಿನ್ನಿಗೆ ಇಂಥ ಪ್ರತಿರೋಧಕತೆ ಕಂಡು ಬಂದು ಅದು ಚಿಕಿತ್ಸಕವಾಗಿ ನಿಷ್ಟ್ರಯೋಜಕವಾದಾಗ ತಕ್ಕ ಎಚ್ಚರಿಕೆ ವಹಿಸಿ ಬ್ಯಾಸಿಟ್ರೇಸಿನ್ನನ್ನು ಚುಚ್ಚುಮದ್ದಾಗಿ ಬಳಸಬಹುದು. ಅಲ್ಲದೆ ಪೆನಿಸಿಲಿನ್ನಿಗೆ ಮಣಿಯದ ಸ್ಟಾಫಿಲೋಕಾಸ್ ಆರಿಯಸ್ ಗ್ಯಾಸ್ ಗ್ಯಾಂಗ್ರೀನಿನ ವಿಷಾಣು, ಧನುರ್ವಾಯುವಿನ ವಿಷಾಣು ಇವುಗಳ ಮೇಲೆ ಬ್ಯಾಸಿಟ್ರೇಸಿನ್ ಪ್ರತಿರೋಧಕವಾಗಿ ವರ್ತಿಸುವುದರಿಂದ ಅವುಗಳ ಸೋಂಕಿನಲ್ಲೂ ಇದನ್ನು ಚುಚ್ಚುಮದ್ದಾಗಿ ಬಳಸುವುದಿದೆ.										(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ